ಕೊರೋನಾ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರಗೊಂಡಿದೆ. ಈ ಹಿಂದೆ ಭಾರತದ 6 ಸ್ಟೇಡಿಯಂಗಳಲ್ಲಿ ಚುಟುಕು ಕ್ರಿಕೆಟ್ ಕದನವನ್ನು ಏರ್ಪಡಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ದೇಶದಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬರದಿರುವ ಕಾರಣ ಟೂರ್ನಿಯಿಂದ ಸ್ಟ್ಯಾಂಡ್ ಬೈ ತಾಣವಾದ ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಈ ಸಲ ಎಲ್ಲಿ ಟಿ20 ವಿಶ್ವಕಪ್ ನಡೆಯಲಿದೆ ಎಂಬುದನ್ನೂ ಕೂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಹೌದು, ಯುಎಇನಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಮೂರು ಸ್ಟೇಡಿಯಂಗಳು ಮಾತ್ರ ಲಭ್ಯವಿದೆ. ಈ ಹಿಂದೆ ಐಪಿಎಲ್ ಟೂರ್ನಿ ಆಯೋಜಿಸಲಾಗಿದ್ದ ಶಾರ್ಜಾ ಸ್ಟೇಡಿಯಂ, ಅಬುಧಾಬಿ ಕ್ರಿಕೆಟ್ ಮೈದಾನ, ದುಬೈ ಇಂಟರ್ನ್ಯಾಷನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಟಿ20 ಪಂದ್ಯಾವಳಿಯನ್ನು ಆಯೋಜಿಸಲು ಅವಕಾಶವಿದೆ.
ಹೀಗಾಗಿ ಬಿಸಿಸಿಐ ಈ ಹಿಂದೆ ಯುಎಇನ ಗಡಿ ದೇಶ ಒಮಾನ್ನಲ್ಲೂ ಪಂದ್ಯಾವಳಿಯನ್ನು ಆಯೋಜಿಸಲಿದೆ ಎನ್ನಲಾಗಿತ್ತು. ಒಮಾನ್ ರಾಜಧಾನಿ ಮಸ್ಕತ್ನಲ್ಲಿರುವ ಸ್ಟೇಡಿಯಂನಲ್ಲಿ ಲೀಗ್ ಹಂತದ ಕೆಲ ಪಂದ್ಯಗಳನ್ನು ನಡೆಸಲು ಚಿಂತಿಸಲಾಗಿತ್ತು. ಆದರೀಗ ಟೂರ್ನಿಯ ಕ್ವಾಲಿಫೈಯರ್ ಪಂದ್ಯಗಳನ್ನು ಮಾತ್ರ ಒಮಾನ್ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಉಳಿದ ಸೂಪರ್ 12 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಅದರೊಂದಿಗೆ ಟಿ20 ವಿಶ್ವಕಪ್ ಶಾರ್ಜಾ ಸ್ಟೇಡಿಯಂ, ಅಬುಧಾಬಿ ಕ್ರಿಕೆಟ್ ಮೈದಾನ, ದುಬೈ ಇಂಟರ್ನ್ಯಾಷನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.
ಟಿ20 ವಿಶ್ವಕಪ್ನಲ್ಲಿ ಈ ಬಾರಿ 16 ತಂಡಗಳು ಪಾಲ್ಗೊಳ್ಳಲಿವೆ. ಅದರಲ್ಲಿ ಈಗಾಗಲೇ 8 ದೇಶಗಳು ನೇರವಾಗಿ ಸೂಪರ್ ಟುವೆಲ್ (12) ಹಂತಕ್ಕೆ ಪ್ರವೇಶಿಸಿದೆ. ಇನ್ನು 8 ದೇಶಗಳ 4 ತಂಡಗಳನ್ನು ಅರ್ಹತೆ ಪಡೆಯಬೇಕಿದೆ.
ಸದ್ಯ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ್ ತಂಡಗಳು ನೇರವಾಗಿ ಸೂಪರ್ 12 ನಲ್ಲಿ ಅರ್ಹತೆ ಪಡೆದುಕೊಂಡಿದೆ.
ಇನ್ನು ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್, ಸ್ಕಾಟ್ ಲೆಂಡ್, ನಮೀಬಿಯಾ, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳ ಮಧ್ಯೆ ಅರ್ಹತಾ ಹಣಾಹಣಿ ನಡೆಯಬೇಕಿದೆ. ಇಲ್ಲಿ 8 ತಂಡಗಳನ್ನು 2 ಗುಂಪುಗಳಾಗಿ ವಿಭಜಿಸಲಾಗಿದ್ದು, ಇದರಲ್ಲಿ ಟಾಪ್ 2 ಬಂದ ನಾಲ್ಕು ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಲಿವೆ.
ಕಳೆದ ಟಿ20 ವಿಶ್ವಕಪ್ ಪ್ರಕಾರ ಸೂಪರ್ ಟುವೆಲ್ (12) ವಿಭಾಗಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಎ ಗುಂಪಿನಲ್ಲಿ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳಿವೆ.
ಹಾಗೆಯೇ ಬಿ ಗುಂಪಿನಲ್ಲಿರುವ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಟೀಮ್ ಇಂಡಿಯಾ ಸೆಣಸಲಿದೆ. ಇದರ ಜೊತೆ ಅರ್ಹತಾ ಸುತ್ತಿನಿಂದ ಎರಡು ತಂಡಗಳು ಕೂಡ ಸೇರ್ಪಡೆಯಾಗಲಿದೆ.
ಅಕ್ಟೋಬರ್ 24ರಿಂದ ಸೂಪರ್ 12ರ ಹಂತ ಆರಂಭಗೊಳ್ಳಲಿದ್ದು, ಒಟ್ಟು 30 ಪಂದ್ಯಗಳು ಲೀಗ್ ಹಂತದಲ್ಲಿ ನಡೆಯಲಿವೆ. ಆ ಬಳಿಕ ಪ್ರತೀ ಗುಂಪುಗಳಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಲಿವೆ.
ಸದ್ಯ ಟೀಮ್ ಇಂಡಿಯಾ ಇರುವ ಬಿ ಗ್ರೂಪ್ ಕೂಡ ಬಲಿಷ್ಠ ತಂಡಗಳನ್ನು ಒಳಗೊಂಡಿದ್ದು, ಅದರಲ್ಲೂ ಏಕದಿನ ವಿಶ್ವ ಚಾಂಪಿಯನ್ ತಂಡ ಇಂಗ್ಲೆಂಡ್ ಭಾರತದ ಪಾಲಿಗೆ ಸವಾಲಾಗುವ ಸಾಧ್ಯತೆಯಿದೆ.