ವರ್ಣದ್ರವ್ಯ
ವರ್ಣದ್ರವ್ಯ ಎನ್ನುವುದು ಬಣ್ಣ ಸೇರಿಸಲು ಅಥವಾ ದೃಷ್ಟಿಗೋಚರ ನೋಟವನ್ನು ಬದಲಾಯಿಸಲು ಬಳಸಲಾಗುವ ಪುಡಿ.
ಕೆಲವು ಖನಿಜಗಳು ನೈಸರ್ಗಿಕ ಬಲಗಳ ಪ್ರಭಾವಕ್ಕೊಳಗಾಗಿ ಶಿಥಿಲಗೊಂಡು ತನ್ಮೂಲಕ ಉಂಟಾಗುವ ರಾಸಾಯನಿಕ ಬದಲಾವಣೆಗಳಿಂದ ಮನೋಹರ ಬಣ್ಣಗಳನ್ನು ತಳೆಯುತ್ತವೆ. ಅವನ್ನು ಖನಿಜ ವರ್ಣದ್ರವ್ಯಗಳು ಎಂದು ಕರೆಯುತ್ತೇವೆ (ಮಿನರಲ್ ಪಿಗ್‌ಮೆಂಟ್ಸ್). ದ್ರವ್ಯಬಣ್ಣಗಳು ಮತ್ತು ಬಣ್ಣದ ಸಿಮೆಂಟಿನ ತಯಾರಿಕೆಯಲ್ಲಿ ಇವು ಅತ್ಯಾವಶ್ಯಕ.
ನೈಸರ್ಗಿಕ ವರ್ಣದ್ರವ್ಯಗಳು
ಕಬ್ಬಿಣದ ಅದುರುಗಳಾದ ಹಿಮಟೈಟ್ ಮತ್ತು ಲೈಮೊನೈಟ್ ಬಹು ಪ್ರಮುಖ ನೈಸರ್ಗಿಕ ವರ್ಣದ್ರವ್ಯಗಳು.[೧] ಇವನ್ನು ಬಣ್ಣದ ಮಣ್ಣು, ಬಣ್ಣದ ಧೂಳು, ಕಾವಿ ಈ ಮುಂತಾಗಿ ಕರೆಯುವುದುಂಟು. ಬಣ್ಣಕ್ಕೆ ಮೂಲ ಕಾರಣವಾದ ಕಬ್ಬಿಣ ಆಕ್ಸೈಡಿನ ಪರಿಮಾಣ ಏಕರೀತಿಯಾಗಿರದೆ ನೂರಕ್ಕೆ ಇಪ್ಪತ್ತರಿಂದ ಎಪ್ಪತ್ತರವರೆಗೂ ಇರುತ್ತದೆ. ಖನಿಜದ ಬಣ್ಣ ಊರಿಕೆ (ಸ್ಟೇನಿಂಗ್ ಪವರ್), ಹೊಳಪು ಮತ್ತು ಕಣಗಳ ಸೂಕ್ಷ್ಮತೆ ಇವೇ ಖನಿಜ ವರ್ಣದ್ರವ್ಯದ ಗುಣಮಟ್ಟ ಹಾಗೂ ಮೌಲ್ಯಮಾಪನದಲ್ಲಿ ಗಮನಿಸಬೇಕಾದ ಅಂಶಗಳು.
ನೈಸರ್ಗಿಕ ಬಣ್ಣಗಳ ಬಳಕೆ ಇತಿಹಾಸ ಪೂರ್ವಯುಗದ ಮಾನವನಿಗೂ ತಿಳಿದಿತ್ತೆಂದು ಹೇಳಲು ಸಾಕಷ್ಟು ಆಧಾರಗಳಿವೆ. ಕ್ರೊಮ್ಯಾಗ್ನನ್ ಯುಗದ ಗುಹೆಗಳ ಭಿತ್ತಿಗಳ ಮೇಲೆ ನಿರ್ಮಿತವಾಗಿರುವ ಪ್ರಜ್ವಲಿಸುವ ಬಣ್ಣದ ಚಿತ್ರಗಳೇ ಇದಕ್ಕೆ ಸಾಕ್ಷಿ.[೨] ಪುರಾತನ ಗ್ರೀಕ್ ಕುಂಭಕಲೆಯಲ್ಲೂ, ಈಜಿಪ್ಟಿನ ಶಿಲ್ಪದ ಅಲಂಕಾರಪಟ್ಟಿಗಳಲ್ಲೂ ಮನೋಹರ ಬಣ್ಣಗಳ ಬಳಕೆಯನ್ನು ಗುರುತಿಸಬಹುದು. ಭಾರತದ ಪುರಾತನ ಆರ್ಯರ ಸಿಂಧೂ ಸಂಸ್ಕೃತಿಯ ಗೊಂಬೆಗಳು,[೩] ಮಡಕೆಯ ಚೂರುಗಳ ಮೇಲಿರುವ ಬಣ್ಣಬಣ್ಣದ ಚಿತ್ರಗಳು, ಇವುಗಳಿಗೆಲ್ಲ ನೈಜಬಣ್ಣಗಳನ್ನು ಬಳಸಲಾಗಿದೆ. ಅಮೆರಿಕದ ಪುರಾತನ ಕೆಂಪು ಇಂಡಿಯನ್ ಜನಾಂಗದವರೂ ವರ್ಣದ್ರವ್ಯಗಳಿಂದ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಗ್ರಾಮೀಣ ಕರಕುಶಲವಸ್ತುಗಳ ಬೆಡಗಿಗೆ ಇಂದಿಗೂ ಈ ಬಣ್ಣಗಳು ಮೂಲಾಧಾರ. ಇಂದಿನ ಕೈಗಾರಿಕಾ ಯುಗದಲ್ಲಿ ಸಹ ಕೃತಕವಾಗಿ ತಯಾರಿಸಿರುವ ಬಣ್ಣಗಳಿಗಿಂತ ಇವು ಬೆಲೆಯಲ್ಲಿ ಅಗ್ಗ ಹಾಗೂ ಯಥೇಚ್ಚವಾಗಿ ದೊರೆಯುವ ಕಾರಣ ಮಾರುಕಟ್ಟೆಯಲ್ಲಿ ಇಂದಿಗೂ ಇವುಗಳದೇ ಅಗ್ರಸ್ಥಾನ.
ಪ್ರಮುಖ ಖನಿಜ ವರ್ಣದ್ರವ್ಯಗಳು
ಬಣ್ಣವನ್ನು ಅನುಸರಿಸಿ ಖನಿಜ ವರ್ಣದ್ರವ್ಯಗಳನ್ನು ಕಾವಿ (ರೆಡ್ ಓಕರ್), ಹಳದಿ ದೂಳು, ಹಸಿರು ದೂಳು, ಸಿಯೆನ್ನ, ಅಂಬರ್ ಮುಂತಾಗಿ ಹೆಸರಿಸಲಾಗಿದೆ.
ಕಾವಿ
ಕಾವಿಯನ್ನು ಹಿಂದಿಯಲ್ಲಿ ಗೇರು ಎಂದು ಕರೆಯುತ್ತಾರೆ. ಕಾವಿ ಅಥವಾ ಕೆಂದೂಳು ಮುಖ್ಯವಾಗಿ ಹಿಮಟೈಟ್ ಮತ್ತು ಕಬ್ಬಿಣಾಂಶದಿಂದ ಕೂಡಿದ ಮುರುಕಲ್ಲಿನ ಶೈಥಿಲ್ಯದಿಂದ ಉಂಟಾಗುತ್ತದೆ.[೪] ಅದರಲ್ಲಿ ಸುಮಾರು 70% ರಷ್ಟು Fe2O3 ಇರುವುದು. ಕಾವಿಯಲ್ಲಿ ಇತರ ಹಲವಾರು ವಿಧಗಳಿವೆ:
- ಪರ್ಷಿಯನ್ ಕೆಂಪು ಅಥವಾ ಕ್ರಿಂಸನ್ ಕೆಂಪು: ಇದರಲ್ಲಿ Fe2O3 ಸುಮಾರು 65%-70% ರಷ್ಟಿದೆ. ಈ ವರ್ಣದ್ರವ್ಯ ಪರ್ಷಿಯನ್ ಕೊಲ್ಲಿಯ ಅರ್ಮುಸ್ ದ್ವೀಪದಲ್ಲಿ ದೊರೆಯುತ್ತದೆ.
- ಸ್ಪ್ಯಾನಿಷ್ ಕೆಂಪು: ಇದು ಪರಿಶುದ್ಧವಾದ ಹಾಗೂ ಮೃದುವಾದ ಹಿಮಟೈಟ್.[೫] ಇದರಲ್ಲಿ 80%-90% ರಷ್ಟು Fe2O3 ಉಂಟು. ಇದಕ್ಕೆ ಸ್ಪೇನ್ ದೇಶವೇ ತವರು.
- ಬೋಲ್ ಅಥವಾ ರೆಡ್ಲ್: ಇದು ಕೆಂಪು, ಹಳದಿ ಹಾಗೂ ಕಂದು ಛಾಯೆಯ ಜೇಡಿಮಣ್ಣಿನಂತಿರುತ್ತದೆ. ಇದರಲ್ಲಿ 5%-15% ರಷ್ಟು Fe2O3 ಉಂಟು. ಬಹುಮಟ್ಟಿಗೆ ಭಾರತದ ದಖ್ಖನ್ ಪ್ರಸ್ಥಭೂಮಿಯ ಹಲವಾರು ಕಡೆ ಇದರ ನಿಕ್ಷೇಪಗಳಿವೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್‌ಸಿಲ್ವೇನಿಯ ಕಾವಿಗೆ ಬಹು ಹೆಸರುವಾಸಿ. ಈ ವರ್ಣದ್ರವ್ಯಕ್ಕೆ ಮನೋಹರವಾದ ಲೋಹದ ಹೊಳಪು ಉಂಟು. ಇದಕ್ಕೆ ಮೆಟ್ಯಾಲಿಕ್ ಬ್ರೌನ್ ಎಂದು ಹೆಸರು. ವರ್ಜಿನಿಯ, ಮಿನೆಸೋಟ, ಜಾರ್ಜಿಯ, ಕ್ಯಾಲಿಫೋರ್ನಿಯ ಮತ್ತು ನ್ಯೂಯಾರ್ಕ್ ಪ್ರಾಂತ್ಯಗಳಲ್ಲೂ ಕಾವಿಯ ಉತ್ತಮ ನಿಕ್ಷೇಪಗಳಿವೆ.
ಸಿಯೆನ್ನ
ಕಂದು ಛಾಯೆಯ ಹಳದಿ ಬಣ್ಣದ ಕಾವಿಯೇ ಸಿಯೆನ್ನ. ಇದರಲ್ಲಿ ಸುಮಾರು 60% ರಷ್ಟು Fe2O3 ಮತ್ತು ಅಲ್ಪಸ್ವಲ್ಪ ಮ್ಯಾಂಗನೀಸ್ ಆಕ್ಸೈಡ್ ಸಹ ಉಂಟು. ಇಟಲಿಯ ಸಿಯೆನ್ನ ಬಳಿ ಇದರ ಬೃಹತ್ ನಿಕ್ಷೇಪವಿರುವ ಕಾರಣ ಆ ಹೆಸರೇ ವರ್ಣದ್ರವ್ಯಕ್ಕೂ ಅಂಟಿತು.[೬] ಕೆಲವು ಬಾರಿ ಇದನ್ನು ಸುಟ್ಟು ಬಳಸುವುದೂ ಇದೆ. ಹೀಗೆ ಮಾಡಿದಾಗ ಇದು ಕಂದು ಮಿಶ್ರಿತ ಕೆಂಪು ಬಣ್ಣವನ್ನು ತಳೆಯುತ್ತದೆ.[೭]
ಅಂಬರ್
ಹೀಗೆಯೇ ಇಟಲಿಯ ಕೇಂದ್ರ ಪ್ರದೇಶದಲ್ಲಿ ದೊರೆಯುವ ಆ್ಯಂಬರಿಗೆ ಹಸಿರು ಛಾಯೆಯ ಕಂದುಬಣ್ಣ ಉಂಟು.[೮]: 250 ಇದರಲ್ಲಿ ಸುಮಾರು 45% ರಷ್ಟು Fe2O3 ಹಾಗೂ 15% ರಷ್ಟು MnO2 ರಾಸಾಯನಿಕ ಧಾತುಗಳಿರುತ್ತವೆ. ಸೈಪ್ರಸ್ ದ್ವೀಪದಲ್ಲಿ ಅತ್ಯುತ್ತಮ ಆ್ಯಂಬರ್ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಇದನ್ನು ಟರ್ಕಿಷ್ ಆ್ಯಂಬರ್ ಎನ್ನುತ್ತಾರೆ.
ಕಪ್ಪು ವರ್ಣದ್ರವ್ಯಗಳು
ಅಚ್ಚು ಕಪ್ಪಾದ ಮ್ಯಾಗ್ನಟೈಟ್, ಗ್ರಾಫೈಟ್ ಹಾಗೂ ಕೆಲವು ಇಂಗಾಲಯುಕ್ತ ಸ್ಲೇಟುಗಳನ್ನು ವರ್ಣದ್ರವ್ಯಗಳಾಗಿ ಬಳಸುವುದುಂಟು. ಇವುಗಳಲ್ಲೆಲ್ಲ ಅತಿಹೆಚ್ಚಿನ ಬಳಕೆಯಲ್ಲಿರುವುದೆಂದರೆ ಸುಮಾರು 94%-95% ರಷ್ಟು Fe2O3 ಅಂಶವಿರುವ ಮ್ಯಾಗ್ನಟೈಟ್ ಎಂದು ಧಾರಾಳವಾಗಿ ಹೇಳಬಹುದು. ಇದನ್ನು ಬಹುಮಟ್ಟಿಗೆ ಲೋಹಮೂಲ ಬಣ್ಣವಾಗಿ (ಮೆಟಲ್ ಪ್ರೈಮರ್) ಬಳಸುತ್ತಾರೆ. ಕಪ್ಪಾದ ಈ ವರ್ಣದ್ರವ್ಯಗಳಿಗೆ ಮೂಲವಾದ ಖನಿಜಗಳು ಬವೇರಿಯ, ಸ್ಪೇನ್ ಮತ್ತು ಇಟಲಿಯಲ್ಲಿ ದೊರೆಯುತ್ತವೆ. ಮ್ಯಾಂಗನೀಸ್ ಖನಿಜಗಳಾದ ಪೈರೊಲೂಸೈಟ್,[೯] ಹೌಸ್ಮನೈಟ್ ಹಾಗೂ ಕಲ್ಲಿದ್ದಲನ್ನು ಕಪ್ಪು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಹಸಿರು ವರ್ಣದ್ರವ್ಯಗಳು
ಹಸಿರು ವರ್ಣದ್ರವ್ಯಗಳಲ್ಲಿ ಟೆರೆವರ್ಟಿ, ಹಸಿರು ದೂಳು, ವೆರೋನ ಹಸಿರು, ಸೆಲಡಾನ್ ಹಸಿರು ಹೀಗೆ ಹಲವಾರು ಬಗೆಗಳಿವೆ. ಸಂಯೋಜನೆಯಲ್ಲಿ ಏಕರೀತಿಯಾಗಿರದಿದ್ದರೂ ಇವು ಮುಖ್ಯವಾಗಿ ಆಲ್ಕಲಿ ಮತ್ತು ಮೆಗ್ನೀಸಿಯಂ ಸಿಲಿಕೇಟುಗಳ ಹಾಗೂ ಫೆರ‍್ರಸ್ ಸಿಲಿಕೇಟುಗಳ ಮಿಶ್ರಣವಾಗಿವೆ. ರಾಸಾಯನಿಕ ಸಂಯೋಜನೆಯನ್ನು ಅನುಸರಿಸಿ ತಿಳಿ ನೀಲಿ ಹಸಿರು, ಸೇಬು ಹಸಿರು, ಹಿಪ್ಪೆ ಹಸಿರು, ಹಸಿರು ಮಿಶ್ರಿತ ಕಪ್ಪು ಹೀಗೆ ವಿವಿಧ ಛಾಯೆಗಳನ್ನು ಕಾಣಬಹುದು. ಇವು ಬೊಹಿಮಿಯ ಮತ್ತು ಇಟಲಿ ದೇಶಗಳಲ್ಲಿ ಬೆಸಾಲ್ಟಿಕ್ ಟುಫ್‌ಗಳ ಶೈಥಿಲ್ಯದಿಂದ ಉಂಟಾಗಿವೆ.
ಗಣಿಗಾರಿಕೆ
ಈ ಖನಿಜ ವರ್ಣದ್ರವ್ಯಗಳ ಗಣಿಗಾರಿಕೆ ಅಷ್ಟು ಕಷ್ಟವಲ್ಲ. ಸರಳವಾದ ತೆರೆಗಣಿಗಳಿಂದ (ಓಪನ್ ಮೈನ್ಸ್) ಇವು ದೊರೆಯುತ್ತವೆ. ಒಮ್ಮೊಮ್ಮೆ ಮಾತ್ರ ಸುರಂಗಗಳನ್ನು ಕೊರೆಯಬೇಕಾದೀತು. ಗಣಿಗಳಿಂದ ಹೊರತೆಗೆದ ಖನಿಜಗಳನ್ನು ಬೀಸು ಯಂತ್ರಗಳ ಸಹಾಯದಿಂದ ನಯವಾದ ದೂಳನ್ನಾಗಿ ಮಾಡುತ್ತಾರೆ. ನೀರಿನಲ್ಲಿ ಕದಡಿ ಯಾಂತ್ರಿಕವಾಗಿ ಕಡೆದು ಜಾಲಿಸಿ ಕಶ್ಮಲಗಳನ್ನು ಬೇರ್ಪಡಿಸುತ್ತಾರೆ. ಹೀಗೆ ದೊರತ ಕೆಸರನ್ನು ಒಣಗಿಸಿ ಬಂದ ದೂಳನ್ನು ವಾರ್ನಿಷ್, ಕುಸುಮೆ ಎಣ್ಣೆ ಮುಂತಾದವುಗಳೊಡನೆ ನಿರ್ದಿಷ್ಟ ಪ್ರಮಾಣಗಳಲ್ಲಿ ಬೆರೆಸಿ ದ್ರವಬಣ್ಣಗಳನ್ನು ತಯಾರಿಸುತ್ತಾರೆ.
ಭಾರತದಲ್ಲಿ ಖನಿಜ ವರ್ಣದ್ರವ್ಯಗಳ ನಿಕ್ಷೇಪಗಳು
ಭಾರತದಲ್ಲಿ ಖನಿಜ ವರ್ಣದ್ರವ್ಯಗಳ ಬೃಹತ್ ನಿಕ್ಷೇಪಗಳಿವೆ. ಇಲ್ಲಿ ಅವುಗಳ ಬಳಕೆ ಸಾಕಷ್ಟಿದೆ; ಅಲ್ಲದೆ ನೆರೆಯ ರಾಷ್ಟ್ರಗಳಿಗೂ ಆಲ್ಪಸ್ವಲ್ಪ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ದೊರೆಯುವ ವರ್ಣದ್ರವ್ಯಗಳ ಗುಣಮಟ್ಟವನ್ನು ಉತ್ತಮಪಡಿಸಲು ಪರ್ಷಿಯದಿಂದ ವಾರ್ಷಿಕವಾಗಿ 1,500 ಟನ್‌ಗಳಿಗೂ ಹೆಚ್ಚು ರೆಡ್‌ಆಕ್ಸೈಡನ್ನು ಆಮದು ಮಾಡಲಾಗುತ್ತಿದೆ. 1964ರಲ್ಲಿ ಇವುಗಳ ಉತ್ಪನ್ನ 28,056 ಟನ್‌ಗಳು. ಇವುಗಳ ಸರಾಸರಿ ವಾರ್ಷಿಕ ಉತ್ಪನ್ನ ಸುಮಾರು 1,00,000 ರೂಪಾಯಿ ಮೌಲ್ಯದ ಸುಮಾರು 35,000 ಟನ್‌ಗಳೆಂದು ಅಂದಾಜು ಮಾಡಲಾಗಿದೆ. ವರ್ಣದ್ರವ್ಯ ಖನಿಜಗಳು ಮುಖ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ಥಾನ್, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶಗಳಲ್ಲಿ ದೊರೆಯುತ್ತವೆ. ಮಧ್ಯಪ್ರದೇಶದ ಸಾತ್ನ ಜಿಲ್ಲೆಯ ಜೈತ್ವಾರ್ ಪ್ರದೇಶದಲ್ಲಿ ಅತ್ಯುತ್ತಮ ಕೆಂಪು ಕಾವಿ ಮತ್ತು ಹಳದಿ ದೂಳಿನ ನಿಕ್ಷೇಪಗಳಿವೆ. ಸಾಂಭಾರ್ ಬೆಟ್ಟಗಳು, ಕುಲ್ಕೇರಿಯ, ಗಂಜಾವೊ ಮತ್ತು ಕ್ವೈಲಿಯಗಳಲ್ಲಿ ಹಳದಿ ದೂಳು ದೊರೆಯುತ್ತದೆ. ಗ್ವಾಲಿಯರ್ ಸುತ್ತಮುತ್ತ ಸಾಮಾನ್ಯ ದರ್ಜೆಯ ಕಾವಿ ದೂಳಿನ ನಿಕ್ಷೇಪಗಳಿವೆ. ಬೇಹತ್, ಸುಮಾಲಿ ಮತ್ತು ಸಂಗವಾನ್‌ಗಳ ಬಳಿ ಹಲವಾರು ಗಣಿಗಳನ್ನು ನೋಡಬಹುದು. ಕರ್ನಾಟಕದ ಬೆಳಗಾಂ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ಚಿತ್ರದುರ್ಗ ಜಿಲ್ಲೆಗಳಲ್ಲಿ ಉತ್ತಮ ಕಾವಿಯ ನಿಕ್ಷೇಪಗಳಿವೆ. ಇವುಗಳಿಗೆ ಮೂಲ ದಖನ್ ಶಿಲಾಸ್ತರಗಳು ಹಾಗೂ ಕಬ್ಬಿಣ ನಿಕ್ಷೇಪಗಳು.
ಉಪಯೋಗಗಳು
ಕಬ್ಬಿಣದ ಖನಿಜ ವರ್ಣದ್ರವ್ಯಗಳನ್ನು ದ್ರವಬಣ್ಣಗಳು, ಮರಮುಟ್ಟು ಮತ್ತು ಕಾಗದಗಳಿಗೆ ಬಣ್ಣ ಕಟ್ಟುವಿಕೆ, ಎಣ್ಣೆಬಟ್ಟೆ,[೧೦] ಲಿನೋಲಿಯಂ, ಬಣ್ಣದ ಸಿಮೆಂಟುಗಳು, ಪ್ಲಾಸ್ಟರ್, ರಬ್ಬರ್, ಪ್ಲಾಸ್ಟಿಕ್, ಹಾಸುಗಲ್ಲು, ಕೃತಕ ಚರ್ಮದ ತಯಾರಿಕೆಗಳಲ್ಲಿ ಹೆಚ್ಚಿಗೆ ಬಳಸಲಾಗುತ್ತಿದೆ. ಸಿಯೆನ್ನ ಮತ್ತು ಆ್ಯಂಬರುಗಳನ್ನು ಮರ ಮತ್ತು ಕಾಗದಗಳಿಗೆ ಬಣ್ಣ ಕಟ್ಟಲು ಉಪಯೋಗಿಸುತ್ತಾರೆ.
ಖನಿಜ ವರ್ಣದ್ರವ್ಯಗಳ ಸಂಯೋಜನೆ
ನೈಜ ವರ್ಣದ್ರವ್ಯಗಳು: ಹಳದಿ, ಹಳದಿಮಿಶ್ರಿತ ಕಂದು, ಕಡು ಕಂದು
ಸುಟ್ಟ ವರ್ಣದ್ರವ್ಯಗಳು: ಕೆಂಪು-ಕಂದು, ಕಿತ್ತಳೆಪಾಟಲ, ಕಪ್ಪು.
ದೂಳುಗಳು ಸಿಯೆನ್ನಗಳು ಅಂಬರುಗಳು Fe2O3 Fe2O3 Fe2O3 17% - 60% 25% - 75% 37% - 60% SiO2 MnO2 ಅಲ್ಪ MnO2 35% - 50% 11% - 23% Al2O3 SiO2 SiO2 10% - 40% 10% - 35% 16% - 35% Al2O3 Al2O3 10% - 20% 3% - 13% ದಹನ ನಷ್ಟ ದಹನ ನಷ್ಟ ದಹನ ನಷ್ಟ 10% - 12% 15% - 20% 10% - 15%
ಉಲ್ಲೇಖಗಳು
- ↑ Wilford, John Noble (13 October 2011) "In African Cave, Signs of an Ancient Paint Factory" The New York Times; hardcopy published 14 October 2011 under title "African Cave, Ancient Paint Factory Pushes Human Symbolic Thought ‘Far Back’" New York edition page A-14; archived by WebCite page 1 and page 2 on 11 March 2012
- ↑ Kleiner, F. S. (2016). Gardner's Art through the Ages: The Western Perspective. Vol. I. Cengage Learning. p. 20. ISBN 978-1-305-63394-0.
- ↑ Lal 2002, p. 82.
- ↑ ocher. American Heritage Dictionary. 1969.
- ↑ Gettens & Stout 1966.
- ↑ Webster's New World Dictionary of the American Language, College Edition, (1964)
- ↑ Shorter Oxford English Dictionary, 5th Edition (2002)
- ↑ Clair, Kassia St (2017-10-24). The Secret Lives of Color (in ಇಂಗ್ಲಿಷ್). Penguin. ISBN 978-1-5247-0494-0.
- ↑ Reidies, Arno H. (2002), "Manganese Compounds", Ullmann's Encyclopedia of Industrial Chemistry, vol. 20, Weinheim: Wiley-VCH, pp. 495–542, doi:10.1002/14356007.a16_123, ISBN 978-3-527-30385-4.
- ↑ Knight, William A.; Mende, William R. (2000). Staining and Finishing for Muzzleloading Gun Builders. privately published. Archived from the original on 2013-05-30.
ಗ್ರಂಥಸೂಚಿ
- Lal, B.B. (2002). The Sarasvati flows on.
- Gettens, R. J.; Stout, G. L. (1966). "Iron Oxide Red". Painting Materials: A Short Encyclopedia. Courier Corporation. p. 122. ISBN 978-0-486-14242-5. OCLC 868969354.
ಹೊರಗಿನ ಕೊಂಡಿಗಳು
- Pigments through the ages
- ColourLex Pigment Lexicon
- Sarah Lowengard,The Creation of Color in Eighteenth-century Europe, Columbia University Press, 2006
- Alchemy's Rainbow: Pigment Science and the Art of Conservation on YouTube, Chemical Heritage Foundation
- Poisons and Pigments: A Talk with Art Historian Elisabeth Berry-Drago on YouTube, Chemical Heritage Foundation
- The Quest for the Next Billion-Dollar Color