ವಿಷಯಕ್ಕೆ ಹೋಗು

ತಾಟಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಟಕಿ -ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಬರುವ ಒಬ್ಬ ರಾಕ್ಷಸಿ, ಸುಕೇತುವೆಂಬ ಯಕ್ಷನ ಮಗಳು. ಬ್ರಹ್ಮನ ವರದಿಂದ ಹುಟ್ಟಿದ ಈಕೆ ಅವನ ವರದಿಂದಲೇ ಹತ್ತು ಸಾವಿರ ಆನೆಯ ಬಲವನ್ನು ಪಡೆದಿದ್ದಳು. ಜರ್ಝನೆಂಬ ಯಕ್ಷನ ಮಗನಾದ ಸುಂದ ಈಕೆಯ ಪತಿ. ಬಲಾಢ್ಯರಾದ ಮಾರೀಚ ಸುಬಾಹುಗಳು ಮಕ್ಕಳು. ಪತಿಯ ಮರಣಾನಂತರ ಈಕೆ ಮಕ್ಕಳೊಡನೆ ವನದಲ್ಲಿ ಸಂಚರಿಸುತ್ತಿರುವಾಗ ಈಕೆಯ ಉಕ್ಕುವ ಯೌವನ, ಮೃದು ಕಂಠ, ಆಕರ್ಷಕ ರೂಪಗಳನ್ನು ಕಂಡ ಅಗಸ್ತ್ಯ ನಿನ್ನ ಈ ಮೋಹಕ ರೂಪ ತರುಣ ಕಾಮುಕರಿಗೆ ಭಯಂಕರವಾಗಿ ತೋರಲಿ, ನಿನ್ನ ಮಕ್ಕಳಿಬ್ಬರೂ ರಾಕ್ಷಸರಾಗಲಿ, ಎಂದು ಶಾಪವಿತ್ತ. ಅಂದಿನಿಂದ ಈಕೆ ತಾನು ವಾಸ ಮಾಡುತ್ತಿದ್ದ ಮಲದ ಕರೂಶ ಪ್ರದೇಶಗಳನ್ನು ವಶಪಡಿಸಿಕೊಂಡು ಗೋಬ್ರಾಹ್ಮಣರನ್ನು ಪೀಡಿಸತೊಡಗಿದಳು. ಹತ್ತಿರದ ಆಶ್ರಮದಲ್ಲೇ ಇದ್ದ ವಿಶ್ವಾಮಿತ್ರ ಮಹರ್ಷಿಯಾಗ ಮಾಡತೊಡಗಿದಾಗಲೆಲ್ಲ ಈ ತಾಯಿಮಕ್ಕಳು ಯಜ್ಞಕ್ಕೆ ವಿಘ್ನವನ್ನುಂಟು ಮಾಡುತ್ತಿದ್ದರು.

ವಿಶ್ವಾಮಿತ್ರ ಅಯೋಧ್ಯೆಯ ಅರಸ ದಶರಥನ ಮಕ್ಕಳಾದ ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆತಂದನಷ್ಟೆ. ಬರುವಾಗ ದಾರಿಯಲ್ಲಿ ನಿರ್ಜನವಾಗಿದ್ದ ಮಲದ ಕರೂಶ ದೇಶಗಳನ್ನು ಕಂಡು ಕುತೂಹಲಭರಿತವಾಗಿ ರಾಮಲಕ್ಷ್ಮಣರು ಇದೇನೆಂದು ಕೇಳಲು ಋಷಿ ಅಲ್ಲಿನ ವೃತ್ತಾಂತವನ್ನೆಲ್ಲ ತಿಳಿಸಿ ತಾಟಕಿಯನ್ನು ಕೊಲ್ಲಲು ಪ್ರೋತ್ಸಾಹಿಸಿದ. ಗೋಬ್ರಾಹ್ಮಣರ ಹಿತಕ್ಕಾಗಿ ಪ್ರಜೆಗಳ ಹಿತಕ್ಕಾಗಿ ರಾಮ ಆಕೆಯನ್ನು ನಿಗ್ರಹಿಸಿದ.

ಅವಿದ್ಯಾಸ್ವರೂಪಳಾದ ತಾಟಕಿ ಸತ್ತೊಡನೆ ಹೊರಗೊಳಗೆ ತಿಳಿಯಾಯ್ತು ರಾಮ ಲಕ್ಷ್ಮಣ ಋಷಿಯಾರಾತ್ಮ ಲೋಕತ್ರಯಂ ಎಂದು ರಾಮಾಯಣದರ್ಶನಂ ಮಹಾಕಾವ್ಯ ಹೇಳುತ್ತದೆ.

"https://kn.wikipedia.org/w/index.php?title=ತಾಟಕಿ&oldid=1018029" ಇಂದ ಪಡೆಯಲ್ಪಟ್ಟಿದೆ