ಲಾವಂಚ
ಲಾವಂಚ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. zizanioides
|
Binomial name | |
Cymbopogon cintratus(citronella) | |
Synonyms | |
Vetiveria zizanioides |
ಲಾವಂಚ ಅಥವಾ ರಾಮಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಪೊಯೇಸೀ ಅಥವಾ ಗ್ರಾಮಿನೇ ಕುಟುಂಬಕ್ಕೆ ಸೇರಿದೆ. ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಇದು ಪ್ರಮುಖವಾದುದು. ವೈಜ್ಞಾನಿಕವಾಗಿ ಇದರ ಹೆಸರು ವೆಟಿವೇರಿಯಾ ಜಿಜನಿಯೋಡೆಸ್. "ವೆಟಿವೇರ್ ಹುಲ್ಲು", "ಮಡಿವಾಳ ಬೇರು", "ರಾಮಚ್ಚ", "ಖಸ್" ಎಂದೂ ಕರೆಯುತ್ತಾರೆ.[೧]
ವಿವರ
[ಬದಲಾಯಿಸಿ]ಲಾವಂಚ ಬಹುವಾರ್ಷಿಕ ಬೆಳೆ. ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ.[೨]
ಸಸ್ಯ ಮೈದಾನ, ಗುಡ್ಡಪ್ರದೇಶಗಳಲ್ಲಿ ಮತ್ತು ನದಿ ದಡದಲ್ಲಿ ಸಹಜವಾಗಿ ಬೆಳೆಯುತ್ತದೆ. ಸಮುದ್ರಮಟ್ಟಕ್ಕಿಂತ ಸು. 1200 ಮೀ ಎತ್ತರದವರೆಗೆ ಮತ್ತು ವರ್ಷಕ್ಕೆ 100-200 ಸೆಂಮೀ ಮಳೆ ಸುರಿವ ಪ್ರದೇಶಗಳಲ್ಲಿ ಇವನ್ನು ಬೆಳೆಸಬಹುದು. ದುಂಡಗಿರುವ ಕಾಂಡ ಭೂಮಿಯಲ್ಲಿ ಹುದುಗಿರುತ್ತದೆ. ಎಲೆಗಳ ಉದ್ದ 1.5-2 ಮೀ, ಅಗಲ 1-20 ಸೆಂಮೀ. ಸಸ್ಯದ ಬೇರುಗಳು ಮೃದು. ಸುವಾಸನೆಉಂಟು. ಬಣ್ಣ ತಿಳಿಹಳದಿ, ಹಳದಿ, ಕಂದು ಅಥವಾ ತಿಳಿಗೆಂಪು. ಸಂಕೀರ್ಣ ಪುಷ್ಪಗುಚ್ಛ (ಪ್ಯಾನಿಕಲ್). ಇದರ ಉದ್ದ 15-40 ಸೆಂಮೀ. ಹೂಗಳಿಗೆ ಸ್ಪೈಕ್‌ಲೆಟ್‌ಗಳು (ಕಿರುಹೂಗಳು) ಎಂದು ಹೆಸರು. ಇವುಗಳಿಗೆ ತಿಳಿಹಸುರು ಅಥವಾ ನೇರಿಳೆ ಬಣ್ಣ ಲೇಪಿಸಿದಂತಿರುವುವು. ಗಿಡ ಬೆಳೆದು ಒಂದು ವರ್ಷದ ಬಳಿಕ ಬೇರುಗಳನ್ನು ಮೊನಚಾದ ಚಾಕುವಿನಿಂದ ಬೇರ್ಪಡಿಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಲಾವಂಚವು ವಿವಿಧ ಔಷಧೀಯ ಗುಣಗಳನ್ನೂ ಒಳಗೊಂಡಿದೆ. ನೀರನ್ನು ಶುದ್ಧಗೊಳಿಸುವ ಗುಣವಿರುವುದರಿಂದ ಕುಡಿಯುವ ನೀರಿನ ಪಾತ್ರೆಗೆ ಲಾವಂಚ ಬೇರುಗಳನ್ನು ಹಾಕುತ್ತಾರೆ. ಇದರಿಂದ ನೀರು ಸ್ವಚ್ಛ ಮತ್ತು ಪರಿಮಳಯುಕ್ತವಾಗುವುದು. ಲಾವಂಚದ ತೈಲವನ್ನು ಮೈ-ಕೈ ನೋವು ನಿವಾರಣೆಗೆ ಬಳಸುತ್ತಾರೆ. ವಾತ, ಹೊಟ್ಟೆಶೂಲೆ, ಜಂತು ಹುಳಗಳ ಸಮಸ್ಯೆಗಳು ಲಾವಂಚದ ಬೇರನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯುವುದರಿಂದ ನಿವಾರಣೆಯಾಗುವುದು. ಅಲ್ಲದೆ ಹಲವಾರು ಆಯುರ್ವೇದ ಔಷಧಗಳ ತಯಾರಿಯಲ್ಲೂ ಲಾವಂಚವನ್ನು ಬಳಸುತ್ತಾರೆ. ಲಾವಂಚದ ಬೇರುಗಳನ್ನು ಕುದಿಯುವ ನೀರಿನ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ಉತ್ಪಾದಿಸುತ್ತಾರೆ. ಉತ್ತರ ಭಾರತದಲ್ಲಿ ಬೆಳೆಸಿದ ಸಸ್ಯಗಳಿಂದ ತಯಾರಿಸಿದ ಎಣ್ಣೆಯಲ್ಲಿ ವಾಮಾವರ್ತಕ (ಲಿವೋರೊಟೇಟರಿ), ದಕ್ಷಿಣ ಭಾರತದ್ದು ದಕ್ಷಿಣಾವರ್ತಕ (ಡೆಕ್ಸ್‌ಟ್ರೊರೊಟೇಟರಿ). ಆ ತೈಲವನ್ನು ಸೋಪು, ಅತ್ತರ, ಅಗರು ಬತ್ತಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೇರುಗಳಿಂದ ಹೂವಿನ ಬುಟ್ಟಿ, ಬೀಸಣಿಕೆ, ಗೃಹಾಲಂಕಾರದ ವಸ್ತುಗಳು, ಚಾಪೆ ಇತ್ಯಾದಿಗಳನ್ನು ತಯಾರಿಸುತ್ತಾರೆ.[೧][೩]
ಶ್ರೀಲಂಕಾದ ಚಹಾ ತೋಟಗಳಲ್ಲಿ ಲಾವಂಚ ಹುಲ್ಲನ್ನು ಮಣ್ಣು ಸವೆತ ನಿಯಂತ್ರಿಸಲು ಬೆಳೆಸುತ್ತಾರೆ. ಪರದೆಗಳನ್ನು ಹೆಣೆಯಲು ಕೂಡ ಉಪಯೋಗವಾಗುತ್ತದೆ. ಬೇರುಗಳಿಂದ ಹೆಣೆದ ಬೀಸಣಿಗೆಗಳ ಮೇಲೆ ನೀರು ಚಿಮುಕಿಸಿ, ಗಾಳಿ ಹಾಕುವ ರೂಢಿ ಹಿಂದಿನ ಶತಮಾನಗಳಲ್ಲಿ ಬಳಕೆಯಲ್ಲಿತ್ತು. ಮೊಗಲ್‌ದೊರೆಗಳ ಕಾಲದಲ್ಲಿ ಇವು ಉಪಯೋಗದಲ್ಲಿದ್ದುವು. ಅಂಥ ಬೀಸಣಿಗೆಯಿಂದ ಬಂದ ಗಾಳಿ ಸುವಾಸನಾಭರಿತವಾಗಿರುತ್ತದೆ. ಬೇರುಗಳಿಂದ ಬೇರ್ಪಡಿಸಿರುವ ಜಿಜಿನಾಲ್ ಮತ್ತು ಎಪಿಜಿಜಿನಾಲ್ ಎಂಬ ಟರ್ಪಿನಾಯ್ಡುಗಳು ಸೊಳ್ಳೆಗಳನ್ನು ದೂರವಿಡುತ್ತದೆ.
ನೀರಿಂಗಿಸುವಿಕೆಗೆ
[ಬದಲಾಯಿಸಿ]ಸಾಮಾನ್ಯವಾಗಿ ನದಿ, ಕೆರೆ, ತೋಡು ಇತ್ಯಾದಿಗಳ ಬದಿಯಲ್ಲಿ ಲಾವಂಚದ ಗಿಡಗಳನ್ನು ಕಾಣಬಹುದು. ಲಾವಂಚದ ಬೇರುಗಳು ಸುಮಾರು ಎರಡರಿಂದ ಮೂರು ಮೀಟರುಗಳಷ್ಟು ಭೂಮಿಯ ಆಳಕ್ಕೆ ಇಳಿಯಬಲ್ಲವು. ಇದರಿಂದ ಅದು ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನೀರಿಂಗಿಸುವ ಗುಣವಿದೆ. ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು. ಇದರಿಂದಲೇ ಲಾವಂಚವನ್ನು "ಬಡವನ ನೀರಾವರಿ" ಎನ್ನುವರು. ಜಾನುವಾರುಗಳಿಗೆ ಮೇವು ಒದಗಿಸುವುದಲ್ಲದೆ ಭೂಮಿಯ ಮೇಲೆ ಹಸಿರು ಹೊದಿಕೆಯಾಗಿದ್ದು, ತಂಪಿನ ವಾತಾವರಣ ಸೃಷ್ಟಿಸುವುದು. ನೀರಿನ ಶುದ್ಧೀಕರಣಕ್ಕೆ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ವೆಟಿವೇರ್‌ಗಳನ್ನು ಬಳಸಲಾಗುತ್ತದೆ. ಮುಖ್ಯವಾಗಿ ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್, ವಿಯೆಟ್ನಾಂ, ಸೆನೆಗಲ್ ಮುಂತಾದವುಗಳು.[೧] ಅವು ಕೆಲವೇ ತಿಂಗಳುಗಳಲ್ಲಿ ಬೃಹತ್ ಪೊದೆಯಾಗಿ ಬೆಳೆದು ಹೊಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಇಂಗಿಸಿಕೊಡುತ್ತವೆ. ಒಂದರ್ಥದಲ್ಲಿ ಇವನ್ನು ಬಡವನ ನೀರಾವರಿ ಎಂದೂ ಹೇಳಬಹುದು. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲದ ಮರುಪೂರಣಕ್ಕೆ ಲಾವಂಚವನ್ನು ಒಂದು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು. ಲಾವಂಚವು ಮೇವು, ಕೃಷಿಭೂಮಿಯ ಹೊದಿಕೆಗೆ ಹುಲ್ಲು ಹಾಗೂ ಉರುವಲಿನಂತಹ ಕಿರು ಉತ್ಪನ್ನಗಳನ್ನೂ ಕೊಡುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "ಲಾವಂಚ ಬಹೂಪಯೋಗಿ ಹುಲ್ಲು".
- ↑ ೨.೦ ೨.೧ "ಬಹೂಪಯೋಗಿ ಲಾವಂಚ".
- ↑ "Vetiver | Vetiver Solutions | Fighting Poverty and Malnutrition in Haiti". Vetiver Solutions (in ಅಮೆರಿಕನ್ ಇಂಗ್ಲಿಷ್). Archived from the original on 2018-04-05. Retrieved 2018-04-04.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಲಾವಂಚ ಬಹೂಪಯೋಗಿ ಹುಲ್ಲು
- ನೀವೇ ಬೆಳೆಯಿರಿ ಲಾವಂಚ
- ಬಹೂಪಯೋಗಿ ಲಾವಂಚ
- Vetiver Grass-ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ವರದಿ
- Indian medicinal plants database
- The Vetiver Network International
- Caldecott, Todd (2006). Ayurveda: The Divine Science of Life. Elsevier/Mosby. ISBN 978-0-7234-3410-8. Archived from the original on 18 April 2011. Contains a detailed monograph on Chrysopogon zizanioides (Ushira), as well as a discussion of health benefits and usage in clinical practice.