➤ ಜಲೀಲ್ ಮುಕ್ರಿ
ವೃದ್ಧಾಶ್ರಮ ಹೆಚ್ಚುತ್ತಿರುವ ನಾಡಿನಲ್ಲಿ
ಭೀಕರ ಭವಿಷ್ಯಕ್ಕೆ ಬೊಟ್ಟು ಮಾಡಿ… ಅಂದೇ
ತಾಯಿಯ ಪಾದಗಳಲ್ಲಿ ಸ್ವರ್ಗ
ತೋರಿಸಿದ ಅನಾಥ ಮುತ್ತು ಪ್ರವಾದಿ
ವರ್ಣಭೇದ ನಾಡಿನಲ್ಲಿ
ದಲಿತನೆಂದು ಕೊಲ್ಲುತ್ತಿರುವಾಗ… ಅಂದೇ
ಕಪ್ಪುಕಪ್ಪಗಿರುವ ಬಿಲಾಲ್ ರನ್ನು
ಹೆಗಲಲ್ಲಿ ನಿಲ್ಲಿಸಿದ ಮಾನವತಾವಾದಿ ಪ್ರವಾದಿ…
ಬಿರಿಯಾನಿ ಪರಿಮಳ ನೆರೆಕರೆಗೆ
ಹೋಗದಿರಲೆಂದು ಕಿಟಕಿ ಬಾಗಿಲು ಹಾಕಿ ಭದ್ರಗೊಳಿಸಿ
ಭೂರಿಭೋಜನ ಮಾಡುತ್ತಿರುವಾಗ… ಅಂದೇ
ನಾವು ಉಣ್ಣುವಾಗ ನೆರೆಕರೆ
ಹಸಿದಿರಬಾರದೆಂದು ಕಲ್ಪಿಸಿದ ಕಾರುಣ್ಯನಿಧಿ ಪ್ರವಾದಿ
ಕೊಂದವ, ಕಡಿದವ, ಅತ್ಯಾಚಾರಿ
ತಿಂಗಳೊಳಗೇ ನಿರ್ದೋಷಿಯಾಗಿ ಹೊರಬರುತ್ತಿರುವಾಗ….
ಅಂದೇ ಕದ್ದದ್ದು ಮಗಳು ಫಾತಿಮಾಳಾದರೂ
ಕೈ ಕಡಿಯುವೆನೆಂದ ದಿಟ್ಟ ನ್ಯಾಯಾಧಿಪತಿ ಪ್ರವಾದಿ
ಬಾಲ ಭಿಕ್ಷುಕ ಬಾಲ ಕಾರ್ಮಿಕ ಹೆಚ್ಚಿ
ಅನಾಥರ ಸೊತ್ತು ಕಬಳಿಸುತ್ತಿರುವಾಗ…
ಅಂದೇ ಅನಾಥ ಮಕ್ಕಳ ತನ್ನ ಮಕ್ಕಳಂತೆ
ಪ್ರೀತಿಸಿದ ಅನಾಥ ಸಂರಕ್ಷಕ ಪ್ರವಾದಿ
ವೃದ್ಧಾಶ್ರಮ ಹೆಚ್ಚಿ ಮಕ್ಕಳು ತಾಯಿ-ತಂದೆಯನ್ನು
ಫುಟ್ಬಾಲಿನಂತೆ ನಿನ್ನ ಬಳಿಯಿರಲಿ,
ನಿನ್ನ ಬಳಿಯಿರಲಿ, ವಾದಿಸುತ್ತಿರುವಾಗ…. ಅಂದೇ
ಮಾತಾಪಿತರಲ್ಲಿ “ಛೆ” ಎಂಬ ಮಾತು
ಹೇಳಬಾರದೆಂದು ಸ್ನೇಹ ಪಾಠ ಕಲಿಸಿದ
ಆಮಿನರ ಕಂದ ಪ್ರವಾದಿ
ಸಂಘಟನೆ ಸಿದ್ಧಾಂತವೆಂದು ಹೊಡೆದು
ಬಡಿದಾಡಿಕೊಳ್ಳುತ್ತಿರುವಾಗ…. ಅಂದೇ
ಮರಣ ಸಮಯದಲ್ಲಿ
`ನನ್ನ ಸಮುದಾಯ’ ಎಂದು ಅತ್ತು ಪ್ರಾರ್ಥಿಸಿದ
ಮಾನವಕುಲ ಪ್ರೇಮಿ ಪ್ರವಾದಿ
ಅವನು ಸತ್ತ, ಇವನು ತೀರಿಹೋದ,
ಇವನು ಮಯ್ಯತ್ತ್ ಅವನು ಶವವೆಂದು
ತಾರತಮ್ಯಗಳಾಗುತ್ತಿರುವಾಗ… ಅಂದೇ
ಮುಸ್ಲಿಮೇತರ ಶವ ಹೊತ್ತು ಕೊಂಡು
ಹೋಗುವಾಗ ಎದ್ದು ನಿಂತ ಸರ್ವಧರ್ಮ ನೇತಾರ ಪ್ರವಾದಿ