ಕಲ್ಲಿದ್ದಲು ದಹನ ಹವಾಮಾನ, ಆರೋಗ್ಯಕ್ಕೆ ಮಾರಕವಾಗಿದ್ದು, ಇಂಧನದ ಮುಖ್ಯ ಶಕ್ತಿಯಾಗಿರುವ ಕಲ್ಲಿದ್ದಲನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕೆನ್ನುವ ಕೂಗು ವರ್ಷಗಳಿಂದ ಕೇಳಿ ಬರುತ್ತಿದೆ. ಕಲ್ಲಿದ್ದಲು ಬದಲು ನವೀಕರಿಸಬಹುದಾದ ಮತ್ತು ಶುದ್ಧ (Clean) ಮೂಲಗಳ ಮೇಲೆ ಹೂಡಿಕೆ ಮಾಡಬೇಕು ಎಂಬುವುದು ಪ್ರಸ್ತುತ ಇರುವ ವಾದ. ಆದರೆ ಇನ್ನೂ ಕೂಡ ಭಾರತ (India), ಚೀನಾದಂತಹ ರಾಷ್ಟ್ರಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಹವಮಾನ (Weather), ಆರೋಗ್ಯ (Health) ಆಧಾರಿಸಿ ಈ ಗಣಿಗಾರಿಕೆಯಲ್ಲಿ ಉತ್ಪಾದಿಸುವ ಕಲ್ಲಿದ್ದಿಲ್ಲಿನ ಪ್ರಮಾಣ ಕಡಿಮೆಯಾಗಬಹುದು.
ಉತ್ಪಾದನೆ ಕಡಿಮೆಯಾದಾಗ ಸಿಬ್ಬಂದಿಗಳನ್ನು ತೆಗೆದುಹಾಕುವುದು, ಗಣಿಗಾರಿಕೆಯನ್ನು ಸ್ಥಗಿತಗೊಳಿಸುವುದು ಸಾಮಾನ್ಯ. ಆದರೆ ಹೀಗೆ ಮಾಡುವುದರಿಂದ ಮಿಲಿಯನ್‌ಗಟ್ಟಲೇ ಉದ್ಯೋಗ ನಷ್ಟವಾಗಬಹುದು ಎಂದು ವರದಿಯೊಂದು ಹೇಳಿದೆ.
4 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು
ಜಾಗತಿಕ ಕಲ್ಲಿದ್ದಲು ಉದ್ಯಮವು 2050 ರ ವೇಳೆಗೆ ಸುಮಾರು 1 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಹೊಸ ವರದಿ ಮಾಹಿತಿಯನ್ನು ಹೊರಹಾಕಿದೆ.
ಈ ವಾರ ಗ್ಲೋಬಲ್ ಎನರ್ಜಿ ಮಾನಿಟರ್ ಪ್ರಕಟಿಸಿದ ಹೊಸ ವರದಿಯ ಪ್ರಕಾರ, ಗಣಿ ಮುಚ್ಚುವಿಕೆಯು 2035 ರ ವೇಳೆಗೆ ಸುಮಾರು 15% ಜಾಗತಿಕ ಕಲ್ಲಿದ್ದಲು ಗಣಿಗಾರಿಕೆ ಉದ್ಯೋಗಗಳನ್ನು ಅಂದರೆ ಬರೋಬ್ಬರಿ 400,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಎಂದು ತಿಳಿಸಿದೆ.
ಇಷ್ಟಕ್ಕೆ ಇದು ನಿಲ್ಲುವುದಿಲ್ಲ, 2050ರ ವೇಳೆಗೆ ಈ ಸಂಖ್ಯೆಯು ಸುಮಾರು 1 ಮಿಲಿಯನ್‌ಗೆ ಏರುವ ಸಾಧ್ಯತೆಯಿದೆ ಎಂದು ಗ್ಲೋಬಲ್ ಎನರ್ಜಿ ಮಾನಿಟರ್ ತಿಳಿಸಿದೆ.
ಪರಿಸರ, ಆರೋಗ್ಯಕ್ಕೆ ಮಾರಕವಾಗಿರುವ ಬದಲಿ ವಸ್ತುಗಳನ್ನು ಜಗತ್ತು ಹುಡುಕುತ್ತಿರುವ ಕಾರಣ ಅಗ್ಗದ ಗಾಳಿ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ತಿರುಗಬಹುದು.
ಇದನ್ನೂ ಓದಿ: Mahila Samman Saving Certificate ಬಗ್ಗೆ ನಿಮಗೆ ಏನಾದ್ರೂ ಡೌಟ್ ಇದ್ಯಾ? ಇಲ್ಲಿದೆ ನೋಡಿ ಮಾಹಿತಿ
ಹೀಗಾಗಿ ಕಲ್ಲಿದ್ದಲು ಗಣಿಗಾರಿಕೆ ಕ್ರಮೇಣ ಮುಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಈ ಉದ್ಯಮ ಭಾರತ, ಚೀನಾದಂತಹ ದೇಶದಲ್ಲಿ ಮುಚ್ಚಿ ಹೋದರೆ ಅಲ್ಲಿನ ಸಿಬ್ಬಂದಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪರಿಹಾರ ಏನು?
ಏಕಾಏಕಿ ಇಷ್ಟು ದೊಡ್ಡ ಸಾಮ್ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ತೆಗೆದು ಹಾಕಿದರೆ ಅವರ ಕಥೆ ಏನು? ಅವರಿಗೆ ಏನು ಪರಿಹಾರ ನೀಡಬಹುದು ಅಂತಾನೂ ವರದಿ ತಿಳಿಸಿದೆ.
ವರದಿಯ ಪ್ರಕಾರ, ವಜಾಗೊಳಿಸುವ ಕಠಿಣ ನಿರ್ಧಾರವನ್ನು ಸರಾಗಗೊಳಿಸುವ ಒಂದು ಮಾರ್ಗವೆಂದರೆ ಗಣಿ ಸ್ಥಗಿತಗಳಿಂದ ಪ್ರಚೋದಿಸಲ್ಪಟ್ಟ ಉದ್ಯೋಗಾವಕಾಶಗಳಿಗೆ ಮಾಜಿ ಗಣಿಗಾರರಿಗೆ ಆದ್ಯತೆಯನ್ನು ನೀಡುವುದು.
ಉದಾಹರಣೆಗೆ ಭೂಮಿಯನ್ನು ಪುನರ್ವಸತಿ ಮಾಡಲು ಮತ್ತು ಕಾರ್ಯಾಚರಣೆಗಳನ್ನು ನಿಲ್ಲಿಸಿದ ನಂತರ ಪರಿಸರದ ಪರಿಣಾಮಗಳನ್ನು ತಗ್ಗಿಸಲು ಅಗತ್ಯವಿರುವ ಕೆಲಸ ಅವರಿಗೆ ನೀಡಬೇಕು ಎಂದು ಹೇಳಿದೆ.
ಚೀನಾ ಮತ್ತು ಭಾರತಕ್ಕೆ ದೊಡ್ಡ ಪೆಟ್ಟು
ಗ್ಲೋಬಲ್ ಎನರ್ಜಿ ಮಾನಿಟರ್ ಪ್ರಕಾರ, ಚೀನಾ ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಕಲ್ಲಿದ್ದಲನ್ನು ಉತ್ಪಾದಿಸುತ್ತದೆ ಮತ್ತು ಬಳಸುತ್ತದೆ ಮತ್ತು 1.5 ಮಿಲಿಯನ್ ಗಣಿಗಾರಿಕೆ ಉದ್ಯೋಗಗಳಿಗೆ ನೆಲೆಯಾಗಿದೆ.
ಅದರ ಶಾಂಕ್ಸಿ ಪ್ರಾಂತ್ಯವು 2050 ರ ವೇಳೆಗೆ 240,000 ಕ್ಕೂ ಹೆಚ್ಚು ಗಣಿಗಾರಿಕೆ ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಗಣಿ ಮುಚ್ಚುವಿಕೆಯ ಸಾಮಾಜಿಕ ವೆಚ್ಚವನ್ನು ಸರಾಗಗೊಳಿಸುವ ಸಲುವಾಗಿ ಭೂಗತ ಕಾರ್ಮಿಕರನ್ನು ಸ್ವಯಂಚಾಲಿತ ಯಂತ್ರಗಳೊಂದಿಗೆ ಕ್ರಮೇಣವಾಗಿ ಬದಲಾಯಿಸಲು ಚೀನಾದ ಸರ್ಕಾರವು ಸಂಸ್ಥೆಗಳಿಗೆ ಈಗಾಗ್ಲೇ ಕರೆ ನೀಡಿದೆ.
ಇನ್ನೂ ಸುಮಾರು 337,000 ಕಲ್ಲಿದ್ದಲು ಗಣಿಗಾರರನ್ನು ನೇಮಿಸಿಕೊಂಡಿರುವ ಭಾರತವು ಉದ್ಯೋಗ ನಷ್ಟದ ಹೆಚ್ಚಿನ ಅಪಾಯದಲ್ಲಿದೆ. ಅದರಲ್ಲೂ ಕೋಲ್ ಇಂಡಿಯಾ ಲಿಮಿಟೆಡ್ ಈ ಕಲ್ಲಿದ್ದಲು ಗಣಿಗಾರಿಕೆಯ ಮುಚ್ಚುವಿಕೆಯ ದೊಡ್ಡ ಪರಿಣಾಮ ಎದುರಿಸುವ ಸಾಧ್ಯತೆ ಹೆಚ್ಚು.
ವಜಾಗೊಳಿಸುವಿಕೆಯಿಂದ ಈ ಕಂಪನಿ 2050 ರ ವೇಳೆಗೆ ಸುಮಾರು 74,000 ಕಾರ್ಮಿಕರನ್ನು ಕಳೆದುಕೊಳ್ಳಬಹುದು ಎಂದು ವರದಿ ಅಂಕಿಅಂಶಗಳು ತಿಳಿಸಿವೆ.