ವಿಷಯಕ್ಕೆ ಹೋಗು

ಜೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀನು ಎಂದರೆ ಸವಾರಿ ಕುದುರೆ ಮೇಲೆ ಆರಾಮವಾಗಿ ಕೂರಲು ಹಾಗೂ ಸರಿಯಾದ ಹಿಡಿತ ದೊರೆಯಲು ಬಳಸುವ ಜೋಡಣೆ (ಸ್ಯಾಡಲ್). ತಡಿ, ಪಲ್ಲಣ, ಹಲ್ಲಣ ಪರ್ಯಾಯನಾಮಗಳು. ಜೀನುಗಳ ತಯಾರಿಕೆಗಿಂತ ಎಷ್ಟೊ ಹಿಂದಿನಿಂದಲೂ ಕುದುರೆಗಳನ್ನು ಸವಾರಿಗಾಗಿ ಬಳಸುತ್ತಿದ್ದರು. ಹಾಗಿದ್ದರೂ ಜೀನುಗಳ ಬಳಕೆಯ ಚರಿತ್ರೆ ಕೂಡ ಬಹಳ ಪುರಾತನವಾದದ್ದು. ಕ್ರಿ.ಪೂ. ಸು. 800ರಲ್ಲಿ ಕುದುರೆ ಸವಾರಿಗೆ ಬಟ್ಟೆಯನ್ನು ಜೀನಿನಂತೆ ಪ್ರಥಮ ಬಾರಿಗೆ ಬಳಸಲಾಯಿತು. ಆದರೆ ಜೀನು ಚೌಕಟ್ಟುಳ್ಳ (ಸ್ಯಾಡಲ್ ಟ್ರೀ) ನಿಜವಾದ ಜೀನನ್ನು ಬಳಸಿದುದು ಕ್ರಿ. ಶ. ನಾಲ್ಕನೆಯ ಶತಮಾನದಲ್ಲಿ. ನವೀನ ರೀತಿಯ ಜೀನನ್ನು ಹದಿನಾಲ್ಕನೆಯ ಶತಮಾನದ ಉತ್ತರಾರ್ಧದಲ್ಲಿ ಬೋಹೀಮೀಯದ ಅನ್ನೆ ಎಂಬಾತ ತಯಾರಿಸಿದ.

ಸವಾರಿಗೆ ಬಳಸುವ ಜೀನುಗಳಲ್ಲಿ ಗುಬ್ಬ (ಪೊಮ್ಮೆಲ್), ಪೀಠ (ಸೀಟ್), ಹಿಂಕಮಾನು (ಕ್ಯಾಂಟಲ್), ಕರೆ (ಸ್ಕರ್ಟ್), ಜೀನುಮತ್ತೆ (ಪ್ಯಾನೆಲ್), ಮೆತ್ತೆ ಎದುರುಪದರ (ಪ್ಯಾನೆಲ್ ಫೇಸಿಂಗ್), ಮಂಡಿ ಸುರುಳಿ (ನೀ ರೋಲ್), ಬೆವರು ಪದರ (ಸ್ವೆಟ್ ಫ್ಲ್ಯಾಪ್), ರಿಕಾಪು ಕಂಬಿ (ಸ್ವಿರಪ್ ಬಾರ್), ರಿಕಾಪು ಪಟ್ಟಿ (ಸ್ವಿರಪ್ ಲೆದರ್) ಹಾಗೂ ರಿಕಾಪು (ಸ್ವಿರಪ್ ಐರನ್) ಎಂಬ ವಿವಿಧ ಭಾಗಗಳಿವೆ. ಮುಂದೆ ಹಾಗೂ ಹಿಂದೆ ಕಬ್ಬಿಣದ ಕಮಾನುಗಳು ಮತ್ತು ಪಕ್ಕದಲ್ಲಿ ಮರದ ಪಟ್ಟಿಗಳಿರುವ ಜೀನು ಚೌಕಟ್ಟಿನ ಆಧಾರದ ಮೇಲೆ ಜೀನನ್ನು ತಯಾರಿಸಲಾಗುತ್ತದೆ. ಪಕ್ಕದ ಮರದ ಪಟ್ಟಿಗಳು ಕುದುರೆಯ ಬೆನ್ನಿಗೆ ಹೊಂದುವಂತೆ ಬಗ್ಗಿರುತ್ತವೆ.

ಸಾಮನ್ಯವಾಗಿ ಮೂರು ಬಗೆಯ ಜೀನುಗಳು ಬಳಕೆಯಲ್ಲಿವೆ. ಅವಕ್ಕೆ ಹೊಂದಿಕೆಯಾಗುವಂತೆ ಕುಳಿತುಕೊಳ್ಳುವ ರೀತಿಯಲ್ಲೂ ಮೂರು ವಿಧಗಳಿವೆ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ದುಪ್ಪಟ್ಟಿಯಿಂದ ಅಶ್ವಸೈನಿಕರ ಹೆಚ್ಚಿನ ಕಮಾನಿನ ಜೀನು ಹಾಗೂ ಇಂದು ಬಳಕೆಯಲ್ಲಿರುವ ವಿಧಗಳವರೆಗೆ ಜೀನುಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಮನುಷ್ಯನ ಆವಶ್ಯಕತೆಗಳು ಜೀನಿನ ಆಕಾರವನ್ನು ರೂಪಿಸಿವೆ.

ವಿಹಾರ, ಬೇಟೆ, ಪೋಲೋ ಹಾಗೂ ಕುದುರೆ ಜೂಜುಗಳಿಗೆ ಇಂಗ್ಲಿಷ್ ಜೀನು ಸೂಕ್ತವಾಗಿರುವುದರಿಂದ ಇದೇ ಹೆಚ್ಚು ಬಳಕೆಯಲ್ಲಿರುವ ಮಾದರಿ. ಇದರ ಮುಖ್ಯಲಕ್ಷಣವೆಂದರೆ ಕೆಳಮಟ್ಟದ ಜೀನು ಚೌಕಟ್ಟು, ಗುಬ್ಬ, ಹಿಂಕಮಾನು ಹಾಗೂ ಮೆತ್ತೆಗಳೂ ಕೆಳಮಟ್ಟದಲ್ಲಿವೆ. ಮಂಡಿ ಸುರಳಿ ಸಾಮಾನ್ಯವಾಗಿ ಇರುತ್ತದೆ. ನಡುಪಟ್ಟಿಗಳು ಸಾಮಾನ್ಯವಾಗಿ ಎರಡು, ರಿಕಾಪುಪಟ್ಟಿಯ ಉದ್ದ ಮಧ್ಯಮ. ಟೆಕ್ಸಸ್ ಜೀನು ಪಾಶ್ಚಾತ್ಯ ದೇಶಗಳಲ್ಲಿ ಒರಟು ಸವಾರಿಗಳಿಗಾಗಿ ಬಳಕೆಯಲ್ಲಿ ಉಂಟು. ಇದರ ಚೌಕಟ್ಟಾದ ದೊಡ್ಡಕರೆ, ತಗ್ಗಾದ ಪೀಠ ಮತ್ತು ತೂಕವಾದ ರಿಕಾಪು ಇವೆ. ಸೈನ್ಯದ ಸಲಕರಣೆಗಳನ್ನು ಸಾಗಿಸಲು ಅನುಕೂಲವಾಗುವಂತೆ ರೂಪಿಸಿರುವ ಎತ್ತರದ ಗುಬ್ಬ ಹಾಗೂ ಹಿಂಕಮಾನುಳ್ಳ ಜೀನುಗಳು ಸೈನ್ಯದಲ್ಲಲ್ಲದೆ ಬೇರೆಡೆ ಬಳಕೆಯಲ್ಲಿಲ್ಲ. ಜೀನುಗಳನ್ನು ಆಲಂಕಾರಿಕವಾಗಿ ಇಲ್ಲವೇ ಸಾಮಾನ್ಯವಾಗಿ ತಯಾರಿಸಬಹುದು. ಆದರೆ ಎರಡಕ್ಕೂ ಬಳಸುವ ಚರ್ಮ ಮೃದುವಾಗಿ ಉತ್ತಮ ಗುಣಮಟ್ಟದ್ದಾಗಿರಬೇಕು. ಜೀನಿನ ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಲಕ್ಷ್ಯ ಅಗತ್ಯ. ಜೀನು ತೊಡಿಸುವಾಗ ಹೆಚ್ಚಿನ ಕುದುರೆಗಳು ಎದೆ ಹಿಗ್ಗಿಸುವುದುರಿಂದ ಕೆಲವು ಮಿನಿಟುಗಳ ಬಳಿಕ ಅಥವಾ ಕೆಲವು ಕುದುರೆಗಳಲ್ಲಿ ಒಂದು ಮೈಲು ಪ್ರಯಾಣ ಮಡಿದ ತರುವಾಯ ನಡುಪಟ್ಟಿಯನ್ನು ಸ್ವಲ್ಪ ಬಿಗಿಮಾಡಬೇಕಾಗುತ್ತದೆ. ಆದರೆ ಬಿಗಿ ಮಾಡುವಾಗ ಕುದುರೆಯ ಚರ್ಮ ಮಡಿಕೆ ಬೀಳದಂತೆ ನೋಡಿಕೊಳ್ಳಬೇಕು. ಇಳಿದ ಕೂಡಲೆ ರಿಕಾಪುಗಳನ್ನು ಮೇಲಕ್ಕೆ ಸಿಕ್ಕಿಸಬೇಕು ಇಲ್ಲದಿದ್ದರೆ ನೊಣ ಓಡಿಸುವಂಥ ಯಾವುದೇ ಕೆಲಸಕ್ಕೆ ಕುದುರೆ ತನ್ನ ಹಿಂಗಾಲನ್ನು ಜಾಡಿಸಿದಾಗ ಅದು ರಿಕಾಪಿನಲ್ಲಿ ಸಿಕ್ಕಿಹಾಕಿಕೊಂಡು ಅಪಾಯ ಸಂಭವಿಸಬಹುದು.

ಹಿಂದಿನ ಕಾಲದಲ್ಲಿ ಜೀನನ್ನು ಅದರ ಜಾಗದಲ್ಲಿ ಹಿಡಿದಿಟ್ಟಿರಲು ಎದೆಪಟ್ಟಿಯನ್ನು (ಬ್ರೆಸ್ಟ್ ಪ್ಲೇಟ್) ಬಳಸುತ್ತಿದ್ದರು. ಇಂದು ಕೆಲವು ಬೇಟೆಗಾರರನ್ನು ಬಿಟ್ಟರೆ ಉಳಿದವರಾರೂ ಇದನ್ನು ಬಳಸುತ್ತಿಲ್ಲ. ಜೀನು, ಎದೆಪಟ್ಟಿಗಳಲ್ಲದೆ ಕುದುರೆಯನ್ನು ಹತೋಟಿಯಲ್ಲಿಡಲು ಮುಖವಾಡ (ಬ್ರಿಡಲ್), ಕಡಿವಾಣ (ಬಿಟ್) ಹಾಗೂ ಲಗಾಮುಗಳ (ರೈನ್) ಬಳಕೆ ಆಗುತ್ತದೆ. ಇವುಗಳಲ್ಲೂ ಅನೇಕ ವಿಧಗಳಿವೆ. ಕುದುರೆಯ ಸ್ವಭಾವ ಹಾಗೂ ಬಳಸುವ ಕಾರ್ಯಕ್ಕೆ ಅನುಗುಣವಾಗಿ ಅವುಗಳ ಆಯ್ಕೆ ನಡೆಯುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೀನು&oldid=895207" ಇಂದ ಪಡೆಯಲ್ಪಟ್ಟಿದೆ